ಅನಾಟೋ

	ಬಿಕ್ಸಾ ಒವೆಲೀನ ಎಂಬ ಗಿಡದ ಬೀಜಗಳಿಂದ ತಯಾರಿಸಿದ ಹಳದಿ ವರ್ಣದ ಪದಾರ್ಥವನ್ನು ಅನಾಟೋ ಎಂದು ಕರೆಯುತ್ತಾರೆ. ಅನಾಟೋವನ್ನು ಕೊಡುವಂಥ ಸಸ್ಯಕ್ಕೆ ಅನಾಟೋಸಸ್ಯವೆಂದು ಕರೆಯುತ್ತಾರೆ. ಈ ಸಸ್ಯ ಮಧ್ಯ ಹಾಗೂ ದಕ್ಷಿಣ ಅಮೆರಿಕದ ಮೂಲವಾಸಿ. ಇದರ ಬೀಜದ ಸುತ್ತ ಮೇಣದಂತಿರುವ ಪೊರೆಯಿದೆ; ಸಾಕಷ್ಟು ನೆನೆದಾಗ ಪೊರೆ ಬೀಜದಿಂದ ಬೇರ್ಪಟ್ಟು ನೀರಿನಲ್ಲುಳಿಯುತ್ತದೆ. ಹಾಗೆ ತೊಳೆದ ನೀರನ್ನು ಸೋಸಿ, ಬಂದ ಜಿಗುಟಾದ ತಿರುಳನ್ನು (ಪಲ್ಪ್) ಒಂದು ಕಡೆ ಶೇಖರಿಸಿ ಒಣಗಲು ಬಿಡುವರು. ನೀರಿನ ಅಂಶ ಆವಿಯಾಗಿ ಹೋದಂತೆ ತಿರುಳು ಗಟ್ಟಿಯಾದ ಪಾಕದಂತೆ ನಿಲ್ಲುತ್ತದೆ. ಈ ರೀತಿಯ ಪಾಕದ ಸ್ಥಿತಿಗೆ ರೋಲ್ ಅಥವಾ ಫ್ಲೇಅನಾಟೋ ಎಂದು ಕರೆಯುತ್ತಾರೆ. ಈ ಪಾಕವನ್ನು ಮತ್ತಷ್ಟು ಒಣಗಿಸಿ, ಶೈತ್ಯಾಂಶವನ್ನು ಪೂರ್ಣವಾಗಿ ತೆಗೆದುಹಾಕಿ ಅನಾಟೋ ಬಿಲ್ಲೆಗಳನ್ನು ತಯಾರಿಸುತ್ತಾರೆ. ಹೀಗೆ ಒಣಗಿಸಿದ ವರ್ಣಕಪಾಕವನ್ನು ದೇಹದ ಮೇಲೆ ಬಣ್ಣ ಹಾಕುವುದಕ್ಕೂ ಬೆಣ್ಣೆಗೆ ಬಣ್ಣ ಹಾಕುವುದಕ್ಕೂ ಕ್ಯಾಲಿಕೋ ಪ್ರಿಂಟಿಂಗ್‍ನಲ್ಲಿ ಬಟ್ಟೆಗೆ ಬಣ್ಣ ಹಾಕುವುದಕ್ಕೂ ಬಳಸುತ್ತಾರೆ.
(ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ